ಫೀಲ್ಡ್, ಬ್ಯಾರನ್
	1786-1846. ಎರಡು ಕವನ ಸಂಗ್ರಹಗಳ ಕರ್ತೃ. ನ್ಯೂ ಸೌತ್‍ವೇಲ್ಸಿನ ಸುಪ್ರೀಮ್‍ಕೋರ್ಟಿನ ಮುಖ್ಯ ನ್ಯಾಯಾಧೀಶನಾಗಿ 1916ರಲ್ಲಿ ಆಸ್ಟ್ರೇಲಿಯಕ್ಕೆ ಹೋದವ. 1824ರ ತನಕ ಅಲ್ಲಿಯೆ ವಾಸಿಸಿದ. ಫಸ್ಟ್ ಫ್ರೂಟ್ಸ್ ಆಫ್ ಆಸ್ಟ್ರೇಲಿಯನ್ ಪೊಯೆಟ್ರಿ (ಆಸ್ಟ್ರೇಲಿಯನ್ ಕಾವ್ಯದ ಪ್ರಥಮ ಫಲಗಳು) ಎಂಬ ಕವನ ಸಂಗ್ರಹವನ್ನು ಖಾಸಗಿ ಪರಿಚಲನೆಗಾಗಿ ಮುದ್ರಿಸಿ, ಪ್ರಕಟಿಸಿದ. ಇದು ಆಸ್ಟ್ರೇಲಿಯದ ಅತ್ಯಂತ ಆರಂಭದ ಕಾವ್ಯ. ಆದರಿದು ಅದೇ ನಾಡಿನ ಮಣ್ಣಿನಲ್ಲಿ ಹುಟ್ಟದೆ ಗ್ರೇಟ್‍ಬ್ರಿಟನ್ನಿನಲ್ಲಿ ಜನಿಸಿತೆಂದು ಹೇಳಬೇಕಾಗುತ್ತದೆ. ಕಾವ್ಯವಸ್ತುವನ್ನು ಫೀಲ್ಡ್ ಉದಾರವಾಗಿ ಎರವಲು ಪಡೆದದ್ದು ಕಂಡುಬರುತ್ತದೆ. ಇವನ ಎರಡನೆಯ ಕವನ ದಿ ಕಾಂಗರೂ ಆಗ ಸ್ವಲ್ಪ ಪ್ರಸಿದ್ಧಿ ಪಡೆಯಿತು. ಇದರಲ್ಲಿ ಸತ್ತ್ವ ಕಡಿಮೆಯಿದ್ದರೂ ಸುಂದರವಾದ ಅತಿಶಯೋಕ್ತಿಗೆ ಕೊರತೆಯೇ ಇಲ್ಲ. ಫೀಲ್ಡ್ ಒಬ್ಬಿಬ್ಬರು ಮಿತ್ರರ ಪುಸ್ತಕಗಳನ್ನು ಸಂಪಾದಿಸಿದ ದಾಖಲೆ ಸಿಗುತ್ತದೆ.

	ಚಾಲ್ರ್ಸ್ ಲ್ಯಾಮನ ಮಿತ್ರನಾದ ಈತ ಅವನೊಂದಿಗೆ ಮ್ಯಾಕರಿ ಎಂಡಿಗೆ ಪ್ರವಾಸಕ್ಕೆ ಹೋಗಿದ್ದ. ಇವನ ದಿ ಕಾಂಗರೂ ಕುರಿತು ಲ್ಯಾಮ್ ಕೆಲವು ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸಿದ್ದಾನೆ.
(ಪಿ.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ